.‘ವಾನರಾಧಿಪ, ನಮ್ಮ ಕಾರ್ಯದ ಒಂದು ಪ್ರಧಾನವಾದ ಹಂತ ಮುಗಿದಂತಾಯಿತು. ನಮ್ಮ ಸೈನ್ಯ ಈ ಸೇತುವೆಯನ್ನು ದಾಟಿ ಲಂಕೆಯನ್ನು ಪ್ರವೇಶಿಸುವುದು ಎರಡನೆಯ ಹಂತ. ಈ ಸೇತುವೆಯನ್ನು ದಾಟುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ದಾಟುವಂತೆ ನಮ್ಮ ಸೈನ್ಯಕ್ಕೆ ತಿಳಿಸಬೇಕು. ಪ್ರತಿಯೊಂದು ಕಾರ್ಯವೂ ವ್ಯವಸ್ಥಿತವಾದ ರೀತಿಯಿಂದ ನಡೆದರೆ ಮಾತ್ರ ಯಶಸ್ಸು ಲಭಿಸುತ್ತದೆ. ವಿವೇಚನಾರಹಿತರಾಗಿ ಯಾವುದಕ್ಕೂ ಮರುಳಾಗಬಾರದು. ಸೇತುವೆಯಲ್ಲಿ ಅಪಾರವಾದ ಸೈನ್ಯ ನಡೆಯುವಾಗ ನಾ ಮುಂದು ತಾ ಮುಂದು ಎಂದು ನುಗ್ಗಲಾರಂಭಿಸಿದರೆ ಕೆಲವರು ಸಮುದ್ರಕ್ಕೆ ಬಿದ್ದು ಹೋಗಬಹುದು! ಗೊಂದಲವುಂಟಾಗದಂತೆ ಶಿಸ್ತುಬದ್ಧವಾಗಿ ನಡೆಯಬೇಕು. ಅಶಿಸ್ತು ಮಾಡಿದರೆ ಅನಪೇಕ್ಷಿತವಾದ, ಅನಿರೀಕ್ಷಿತವಾದ ಆಕಸ್ಮಿಕ ಆವಿರ್ಭವಿಸುತ್ತದೆ. ಲಂಕೆಯನ್ನು ತಲುಪಿದ ಮೇಲೆ ಇನ್ನೂ ಹೆಚ್ಚಿನ ಎಚ್ಚರಿಕೆ ಅಗತ್ಯ. ಏಕೆಂದರೆ ಅಲ್ಲಿ ಶತ್ರುವಿನ ಆಳ್ವಿಕೆಯಿದೆ. ರಾಕ್ಷಸರು ಕಾವಲಿರುತ್ತಾರೆ. ಒಬ್ಬೊಬ್ಬರಾಗಿ ಅವರ ಕೈಗೆ ಸಿಕ್ಕಿದರೆ ಅಪಾಯವುಂಟಾಗಬಹುದು. ಅಲ್ಲಿ ಹುಲ್ಲು ಕಡ್ಡಿಯನ್ನೂ ಕೂಡ ಕೀಳಬಾರದು. ಆಹಾರ ವಿಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಶತ್ರುಗಳಿಂದ ಹೆಜ್ಜೆ ಹೆಜ್ಜೆಗೂ ಅಪಾಯವುಂಟಾಗುತ್ತದೆ ಎಂಬ ಭಾವನೆಯಿಂದ ಜಾಗೃತರಾಗಿರಬೇಕು. ಆದ್ದರಿಂದ ಸೈನಿಕ ಶಿಸ್ತಿನಿಂದ ಪ್ರತಿಯೊಂದು ವ್ಯವಹಾರವೂ ನಡೆಯಬೇಕು.” ಎಂದು ಹೇಳಿ ವಾನರ ಪ್ರಮುಖರಿಗೆ ಮಾರ್ಗದರ್ಶನವನ್ನು ಮಾಡಿದನು.
— 28 February 2017